ಬಾಸ್ಕ್
ಪಿರನೀಸ್ ಪರ್ವತದ ಇಳಿಜಾರು ಪ್ರದೇಶಗಳಲ್ಲಿ ವಾಸಿಸುವ ಜನರ ಹೆಸರು ಮತ್ತು ಭಾಷೆ. ಸ್ಪೇನ್ ಪ್ರಾಂತ್ಯದ ಬಿಸ್ಕೆ ಕೊಲ್ಲಿ ಪ್ರದೇಶದ ಜನರ ಪೈಕಿ ಸುಮಾರು 23,40,000 ಮಂದಿಯೂ ಫ್ರಾನ್ಸಿನ ಪಿರನೀಸ್ ಫ್ರೆಂಚ್ ಪ್ರಾಂತ್ಯಗಳಲ್ಲಿಯ ಜನರ ಪೈಕಿ ಸುಮಾರು 5,00,000 ಮಂದಿಯೂ ಈ ಭಾಷೆಗಳನ್ನು ಮಾತನಾಡುತ್ತಾರೆ. ತಮ್ಮ ಭಾಷೆ ಮತ್ತು ಸಂಸ್ಕøತಿಯನ್ನು ಮೂಲ ರೂಪದಲ್ಲೇ ಉಳಿಸಿಕೊಂಡು ಈ ಜನ ಕೆಲಮಟ್ಟಿಗಾದರೂ ತಮ್ಮ ತಮ್ಮ ಭೌತಿಕ ಲಕ್ಷಣಗಳನ್ನು ಇನ್ನೂ ಉಳಿಸಿಕೊಂಡಿದ್ದಾರೆ.

	ಬಾಸ್ಕ್ ಭಾಷೆ ಅವರ್ಗೀಕೃತ ಭಾಷಾಪರಿವಾರಕ್ಕೆ ಸೇರಿದೆ. ಇದು ಇಬೇರಿಯನ್ ಭಾಷೆಯಿಂದ ವಿಕಾಸಗೊಂಡು ಅಕ್ವಂಟೇನಿಯನ್ ಭಾಷೆಯಿಂದ ಉಗಮಗೊಂಡಿರಬಹುದೆಂದು ಭಾಷಾವಿಜ್ಞಾನಿಗಳು ಊಹಿಸಿದ್ದಾರೆ. ಈ ಭಾಷೆಯನ್ನು ಇಬೆರೋಬಾಸ್ಕ್, ಯುಸ್ಕಾರ, ಎಸ್ಕುರ ಎಂತಲೂ ಕರೆಯುವರು. ಇದು ಪ್ರಾಚೀನ ಭಾಷೆಯಾಗಿದ್ದು ಅನೇಕ ಉಪಭಾಷೆಗಳನ್ನು ಹೊಂದಿದೆ. ಅವುಗಳ ಪೈಕಿ ಗುಇಪುಜ್, ಕೋಯಸ್, ವನರೀಸ್ ಲಬರ್ಡಿನ್ ಮತ್ತು ನೋವುಲಿನ್ ಮುಖ್ಯವಾದುವು. ನವರೀಸ್ ಉಪಭಾಷೆಯಲ್ಲಿ, ಬಾಸನ್ ಮತ್ತು ಹವುತ್ ಎಂಬ ಎರಡು ಪ್ರಭೇದಗಳಿವೆ. ಇವುಗಳಲ್ಲಿ ಇಂಡೊಯೂರೊಪಿಯನ್ ಭಾಷೆಗಳ ಪ್ರಭಾವ ಕಾಣಬಹುದು. 

	ಈ ಭಾಷೆಯ ಸ್ವರ ಹಾಗೂ ವ್ಯಂಜನ ಧ್ವನಿಗಳು ಸರಳವಾಗಿ ಕಂಡುಬಂದರೂ ಅವುಗಳಿಂದ ಸಿದ್ಧಗೊಂಡ ಪದಗಳನ್ನು ಉಚ್ಚರಿಸುವುದು ಕಷ್ಟ. ಕ್ಲಿಷ್ಟಪದಗಳು ಈ ಭಾಷೆಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹ್ರಸ್ವ ಮತ್ತು ದೀರ್ಘ ಸ್ವರಗಳಲ್ಲಿ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸಲು ಸಾಧ್ಯವಿಲ್ಲ. ಈ ಭಾಷೆ ಅಶ್ಲಿಷ್ಟ ಅಂತ್ಯಯೋಗಾತ್ಮಕ ಭಾಷೆ. ಉಪಪದಗಳನ್ನು ಪರಸರ್ಗಗಳಂತೆ ಅಂತ್ಯದಲ್ಲಿ ಉಪಯೋಗಿಸಲಾಗುತ್ತದೆ. ಸರ್ವನಾಮಗಳು ಬಹಳ ಸರಳವಾಗಿವೆ. ಇವು ಸೆಮಿಟಿಕ್ ಮತ್ತು ಹೆಮೆಟಿಕ್ ಭಾಷಾಪರಿವಾರಕ್ಕೆ ಸೇರಿದ ಭಾಷೆಗಳನ್ನು ಹೆಚ್ಚು ಹೋಲುತ್ತವೆ. ಕ್ರಿಯಾರೂಪಗಳು ತುಂಬ ಜಟಿಲವಾಗಿದೆ. ಅಲ್ಲದೆ ಅವುಗಳ ಪ್ರ್ರಯೋಗದಲ್ಲಿ ಕೂಡ ಕ್ಲಿಷ್ಟತೆ ಕಾಣಿಸಿಕೊಳ್ಳುತ್ತದೆ. ಕ್ರಿಯಾರೂಪಗಳನ್ನು ಅವುಗಳ ಅಭ್ಯಾಸಬಲದಿಂದ ಮಾತ್ರ ಪತ್ತೆ ಹಚ್ಚಿ ವಿವರಿಸಿಕೊಳ್ಳಲು ಸಾಧ್ಯ. ಸರ್ವನಾಮ ಹಾಗೂ ಕ್ರಿಯಾರೂಪಗಳು ಪರಸ್ಪರ ಐಕ್ಯವಾಗಿ ಹೋಗಬಹುದಾದ ಸಾಧ್ಯತೆ ಈ ಭಾಷೆಯಲ್ಲಿದೆ. ಕ್ರಿಯಾ ಹಾಗೂ ಸರ್ವನಾಮ ರೂಪಗಳು ಕೂಡಿಕೊಂಡಾಗ ಅವುಗಳ ಮೂಲರೂಪವನ್ನು ಸುಲಭವಾಗಿ ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ. ವಾಕ್ಯರಚನೆ, ಶಬ್ದಗಳ ಉಚ್ಚಾರಣೆ ಸುಲಭವಲ್ಲ. ಕ್ರಿಯಾ ರೂಪಗಳು ಇಂಡೊಅರ್ಯನ್ ಭಾಷೆಗಳಂತೆಯೇ ಸಾಮಾನ್ಯವಾಗಿ ಅಂತ್ಯದಲ್ಲಿಯೇ ಬರುತ್ತವೆ. ಲಿಂಗ ವಚನ ವಿಚಾರ ಸ್ಪಷ್ಟವಿಲ್ಲ. ಲಿಂಗ ವಿಚಾರ ಸಾಮಾನ್ಯವಾಗಿ ಕ್ರಿಯಾರೂಪವನ್ನೇ ಅವಲಂಬಿಸಿ ನಿರ್ಧರಿತವಾಗುತ್ತದೆ. ಅಲ್ಲದೆ ಅವು ಕ್ರಿಯೆಯನ್ನು ಅನುಸರಿಸಿಯೇ ವ್ಯತ್ಯಾಸವಾಗುತ್ತವೆ. ಕ್ರಿಯಾಪದಗಳಲ್ಲಿ ಗೌರವಸೂಚಕ ಮತ್ತು ಅಗೌರವಸೂಚಕ ಎಂಬ ಎರಡು ರೂಪಗಳಿವೆ. ಕ್ರಿಯಾ ಧಾತುಗಳು ವಾಕ್ಯರಚನೆ ಅಥವಾ ಪದರಚನೆಗಳಲ್ಲಿ ಪರಿವರ್ತನೆಗೊಂಡಾಗ ಅವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಈ ಭಾಷೆಯಲ್ಲಿ ಶಬ್ಧಗಳ ಸಂಖ್ಯೆ ಬಲು ಕಡಿಮೆ. ಸೂಕ್ಷ್ಮಭಾವಗಳನ್ನು ಅಭಿವ್ಯಕ್ತಗೊಳಿಸಲು ಶಬ್ದಗಳೇ ದೊರೆಯುವುದಿಲ್ಲ. ಇಂಥ ಶಬ್ದಗಳ ಅಭಾವದಿಂದಾಗಿಯೇ ವಾಕ್ಯಗಳಲ್ಲಿ ಪರಿಪೂರ್ಣತೆ ಹಾಗೂ ವ್ಯಾಕರಣದಲ್ಲಿ ಸ್ಪಷ್ಟತೆ ಕಂಡುಕೊಳ್ಳಲು ಕಷ್ಟವಾಗಿದೆ. 

	ಈ ಭಾಷೆಯನ್ನು ಬರೆಯಲು ಲ್ಯಾಟಿನ್ ಲಿಪಿಯನ್ನು ಬಳಸುತ್ತಾರೆ. 					(ಕೆ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ